ಪೂಷ್ಕಿನ್, ಯೂಲಿಕ್ಸಾಂದರ್ ಸಿರ್ಗೇಯವಿಚ್
	1799-1837. ರಷ್ಯದ ಮಹಾಕವಿ. ಹಿರಿಯ ಜಮೀನ್ದಾರ ಮನೆತನದಲ್ಲಿ ಹುಟ್ಟಿದ. ತಂದೆತಾಯಿಗಳೊಡನೆ ಬಾಂಧವ್ಯ ಹಿತಕರವಾಗಿರಲಿಲ್ಲ. ವಿದೇಶ ವ್ಯವಹಾರ ಕಚೇರಿಯಲ್ಲಿ ಗುಮಾಸ್ತನಾಗಿ ಕೆಲಸಕ್ಕೆ ಸೇರಿದ. ತನ್ನ ನಾಸ್ತಿಕವಾದದಿಂದಲೂ ಕ್ರಾಂತಿಕಾರಕ ಚಾಟುಪದ್ಯಗಳಿಂದಲೂ ಕಷ್ಟವನ್ನನುಭವಿಸಬೇಕಾಯಿತು. ಅಮೇಲಿಯ ರಿಜನಿಕ್ ಎಂಬಾಕೆಯ ಸಂಪರ್ಕ ಹಲವು ಸುಂದರ ಗೀತೆಗಳಿಗೆ ಸ್ಫೂರ್ತಿ ನೀಡಿತು. ನತಾಲಿ ಗಾಂಚರೊವ ಎಂಬ ಚಲುವೆಯನ್ನು ಮದುವೆಯಾದುದು (1831) ಹಲವು ಕಷ್ಟಗಳಿಗೂ ಅವಮಾನಗಳಿಗೂ ಕಾರಣವಾಯಿತು. ಪತ್ನಿಯ ದುಂದುವೆಚ್ಚ, ಅರಸ ಆಕೆಯಲ್ಲಿ ತೋರಿಸುತ್ತಿದ್ದ ಅನುರಾಗ, ಇನ್ನಿತರರೊಡನೆ ಅವಳ ಪ್ರಣಯ-ಎಲ್ಲ ಈತನ ಬಾಳನ್ನು ದುಸ್ಸಹವನ್ನಾಗಿ ಮಾಡಿದುವು. ಕೊನೆಗೆ ಈತ ದ್ವಂದ್ವಯುದ್ಧವೊಂದರಲ್ಲಿ ಸಾವಿಗೀಡಾದ.

	1814ರಲ್ಲಿಯೇ ಪೂಷ್ಕಿನ್ ಸಾಹಿತ್ಯ ರಚನೆ ಪ್ರಾರಂಭಿಸಿದ. ಅಲ್ಲಿಂದ 1818ರ ತನಕವೂ ಕೈ ಪಳಗಿಸಿಕೊಂಡ. ಪ್ರತಿಮೆಗಳಿಲ್ಲದ, ಲಾಲಿತ್ಯ-ಪ್ರಸನ್ನತೆಗಳು ಎದ್ದುಕಾಣುವ ಶೈಲಿ ಕರಗತವಾಯಿತು. ಪೂಷ್ಕಿನ್ ಹಲವು ಸಾಹಿತಿಗಳ ಪ್ರಭಾವಕ್ಕೆ ಒಳಗಾದವ. ಕಾವ್ಯದಲ್ಲಿ ಪ್ರಾರಂಭದ ದೆಸೆಯಲ್ಲಿ ರಷ್ಯನ್ ಕವಿಗಳ, ಅನಂತರ ಫ್ರೆಂಚ್ ಕವಿಗಳ ಆಮೇಲೆ ಬೈರನ್ನನ ಪ್ರಭಾವ ಇವನ ಬರಹಗಳಲ್ಲಿ ಕಂಡುಬರುತ್ತದೆ. ಆದರೆ, ಶೀಘ್ರವಾಗಿ ಈತ ತನ್ನ ವಿಶಿಷ್ಟ ಶಕ್ತಿಯನ್ನು ಶೈಲಿಯನ್ನು ಗುರುತಿಸಿಕೊಂಡ. ಮೊದಲನೇ ಗಮನಾರ್ಹ ಕೃತಿ ರಸ್ಲಾನ್ ಆಂಡ್ ರುಡ್‍ಮಿಲ (1820). ಇದು ಫ್ರೆಂಚ್ ಕವಿಗಳ ಪ್ರಭಾವದ ಅವಧಿಯಲ್ಲಿ ರಚಿತವಾದುದು. ಆದರೆ, ಇದರಲ್ಲಿಯೇ ಇವನ ಲೀಲಾಜಾಲವಾದ ಕಾವ್ಯ ಸೃಷ್ಟಿಯ ಶಕ್ತಿ. ಥಳಥಳಿಸುವ ಚತುರೋಕ್ತಿ ಸ್ಪಷ್ಟತೆ - ಇವೆಲ್ಲವನ್ನೂ ಕಾಣಬಹುದು. ಇದರ ಪ್ರಕಟಣೆ ರಷ್ಯನ್ ಕಾವ್ಯ ಚರಿತ್ರೆಯಲ್ಲಿ ಒಂದು ಮೈಲಿಗಲ್ಲೆಂದು ಹಲವರು ಸ್ವಾಗತಿಸಿದರು. ದಿ ಪ್ರಿಸ್ನರ್ ಆಫ್ ದಿ ಕಾಕಸಸ್ (1821) ಮತ್ತು ದಿ ಫೌಂಟನ್ಸ್ ಆಫ್ ಬ್ಯಾಕಿಸೇರಾಯ್ (1824) ಎಂಬ ಎರಡು ಕಾವ್ಯಗಳು ಇವನಿಗೆ ಕೀರ್ತಿ ತಂದುವು. ಮರುವರ್ಷವೇ ಈತನ ಇನ್ನೊಂದು ಮುಖ್ಯ ಕಾವ್ಯ ದಿ ಜಪ್ಸೀಸ್ ಪ್ರಕಟವಾಯಿತು. ಇವುಗಳಲ್ಲಿ ಒಳಗಿನ ತಿರುಳು ಕಡಿಮೆ. ಆದರೆ, ಪದಗಳ ಆಯ್ಕೆ ಮತ್ತು ಶಬ್ದಮಾಧುರ್ಯ ಮನೋಹರವಾದವು. ಶಬ್ದಮಾಧುರ್ಯದ ಪರಿಪೂರ್ಣತೆಯನ್ನು ಬ್ಯಾಕಿಸೇರಾಯ್ ಸಾಧಿಸಿತು. ಪ್ರೇಮಕ್ಕೆ ಸರ್ವಸ್ವವನ್ನೂ ಅರ್ಪಿಸಿಕೊಂಡ ಪೌರಸ್ತ್ಯ ಲಾವಣ್ಯವತಿ, ರೋಮಾಂಚನಗೊಳಿಸುವ ಜೀವನವನ್ನು ನಡೆಸಿ ಕಹಿಯನ್ನುಂಡ ನಾಯಕ, ನಿರ್ದಯನೂ ಮಿತಭಾಷಿಯೂ ಆದ ಪೌರಸ್ತ್ಯ ಪ್ರಭು-ಇಂಥ ಪಾತ್ರಗಳ ಸೃಷ್ಟಿ, ನಾಟಕೀಯ ಕಥನ ರೀತಿ, ಅನಿರೀಕ್ಷಿತ ತಿರುವುಗಳು - ಇವುಗಳಲ್ಲಿ ಬೈರನ್ನನ ಪ್ರಭಾವವನ್ನು ಕಾಣಬಹುದು. 1824 ರಿಂದ 1833ರವರೆಗಿನದು. ಪೂಷ್ಕಿನ್ನನ ಸಾಹಿತ್ಯ ಸೃಷ್ಟಿಯಲ್ಲಿ ಸುಗ್ಗಿಯ ಕಾಲ. ದಿ ಜಿಪ್ಸೀಸ್ ಸ್ತ್ರೀ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಮತ್ತು ಶಿಕ್ಷೆಯ ನಿರರ್ಥಕತೆಯನ್ನೂ ನಾಗರಿಕ ಮಾನವನಲ್ಲಿ ರಕ್ತಗತವಾಗಿರುವ ಒಡೆತನದ ಬಯಕೆಯನ್ನೂ ನಿರೂಪಿಸುವ ಮಹಾಕಥನ ಕವನ. ಪೂಷ್ಕಿನ್ನನ ಅಸಮಾನ ಕಲ್ಪನೆ ಕಥೆಗೆ ಶಕ್ತಿ ನೀಡುವುದನ್ನು ಇಲ್ಲಿ ಕಾಣಬಹುದು. ಪದ್ಯರೂಪದಲ್ಲಿರುವ ಯೂಜೀನ್ ಓನೀಜಿನ್ (1831) ಎಂಬ ಕಾದಂಬರಿ ಈತನ ಅತ್ಯತ್ತಮ ಕೃತಿ ಎಂದು ವಿಮರ್ಶಕರ ಅಭಿಪ್ರಾಯ. ಹಲವರು ದಿ ಬ್ರಾಂಜ್ ಹಾರ್ಸ್‍ಮನ್ ಎಂಬುದನ್ನು (1833) ಪೂóಷ್ಕಿನ್ನನ ಅತ್ಯತ್ತಮ ಕೃತಿ ಎಂದು ಭಾವಿಸುತ್ತಾರೆ. ಇದು ಸಮಾಜ ಮತ್ತು ವ್ಯಕ್ತಿಯ ಜೀವನಗಳ ಅವಶ್ಯಕತೆಗಳ ಘರ್ಷಣೀಯ ಚಿತ್ರ. ಇಲ್ಲಿ ಪೀಟರ್ಸ್‍ಬರ್ಗ್ ನಗರದಲ್ಲಿನ ಪೀಟರ್ ಮಹಾಶಯನ ಕಂಚಿನ ಪ್ರತಿಮೆ ಸಮಾಜದ ಹಕ್ಕುಗಳ ಮೂರ್ತಿಯಾಗುತ್ತದೆ. ಈ ಅವಧಿಯಲ್ಲಿ ಪೂóಷ್ಕಿನ್ ಹಲವು ಭಾವಗೀತೆಗಳನ್ನು ನಾಡುಪದಗಳನ್ನೂ ಬರೆದ. ಅಂದಿನ ಯಾವ ಕವಿಗೂ ನಿಲುಕದಷ್ಟು ಉತ್ತಮ ಭಾವಗೀತೆಗಳನ್ನು ಈತ ಬರೆದಿದ್ದಾನೆ. ಇವನ ಶೈಲಿ ನಿರಾಡಂಭರವಾದುದು, ಸಂಯಮಪೂರ್ಣವಾದುದು. ಕೃತಿಯಲ್ಲಿ ನಿರೂಪಿಸಿರುವುದು ಎಷ್ಟು ಪರಿಣಾಮವನ್ನುಂಟು ಮಾಡುವುದೋ ನಿರೂಪಿಸದೆ ಬಿಟ್ಟಿರುವುದೂ ಅಷ್ಟೇ ಪರಿಣಾಮಕಾರಿಯಾಗಿದೆ. ವೈಯುಕ್ತಿಕ ಭಾವನೆಗಳು ಸಂಪೂರ್ಣವಾಗಿ ಹಿನ್ನೆಲೆಯಲ್ಲಿ ಉಳಿಯುತ್ತವೆ. ಸಾಧಾರಣೀಕರಣಗೊಂಡ ಹಲವು ಭಾವಗಳು ಮೇಲೆ ತೇಲುತ್ತವೆ. 

ಪೂಷ್ಕಿನ್ ಗಣನೀಯವಾದ ನಾಟಕಗಳನ್ನೂ ರಚಿಸಿದ್ದಾನೆ. ಬೋರಿಸ್ ಗೊಡುನಫ್ (1831) ಇವನ ಮೊದಲ ಅತಿ ದೀರ್ಘ ನಾಟಕ. ಇದರಲ್ಲಿ ಷೇಕ್ಸ್‍ಪಿಯರನ ಪ್ರಭಾವವಿದೆ. ಇದು ರಷ್ಯದಲ್ಲಿ ಮೊದಲನೆ ರೊಮ್ಯಾಂಟಿಕ್ ರುದ್ರ ನಾಟಕ. ಇದನ್ನೂ ವಿಮರ್ಶಕರು ಇವನ ಮೇರುಕೃತಿಗಳ ಸಾಲಿಗೆ ಸೇರಿಸಿದ್ದಾರೆ. ಕೊನೆಯ ಕಾಲದಲ್ಲಿ ಬರೆದ ಕಿರಿದುರಂತ ನಾಟಕಗಳು (1830) ಇದಕ್ಕಿಂತ ಸತ್ತ್ವಯುತವಾದವು ಎಂದು ಕೆಲವರ ಅನಿಸಿಕೆ. ಇವುಗಳಲ್ಲಿ ಇಂಗ್ಲಿಷ್ ಸಾಹಿತ್ಯದ ಪ್ರಭಾವ ಕಾಣುತ್ತದೆ. ಆಧುನಿಕ ಗದ್ಯ ಸಾಹಿತ್ಯದ ಆದ್ಯಪ್ರವರ್ತಕ ಪೂಷ್ಕಿನ್ ರಷ್ಯನ್ ಗದ್ಯಕ್ಕೆ ಆಧುನಿಕತೆಯನ್ನೂ ಜೀವಕಳೆಯನ್ನೂ ಒದಗಿಸಿಕೊಟ್ಟ. ಇವನ ಗದ್ಯ ಸಾಹಿತ್ಯದಲ್ಲಿ ವಾಲ್ಟರ್ ಸ್ಕಾಟನ ಪ್ರಭಾವ ತೋರಿಬರುತ್ತದೆ. ರಷ್ಯದಲ್ಲಿ ಮೊಟ್ಟಮೊದಲು ಸ್ವತಂತ್ರ ಕಾದಂಬರಿಯನ್ನು ರಚಿಸಿದವ ಪೂಷ್ಕಿನ್. ಡೆಲ್ಕನ್ನನ ಕಥೆಗಳು (1830) ಮತ್ತು ದುಬ್ರೊವ್‍ಸ್ಕಿಗಳಲ್ಲಿನ ವೃತ್ತಾಂತ ಕಲೆ ಸೊಗಸಾಗಿದೆ. ಸಣ್ಣ ಕಥೆ ಸೆಕ್ವೀನ್ ಆಫ್ ಸ್ಪೇಡ್ಸ್ (1834) ಎಂಬುದರಲ್ಲಿ ರೊಮ್ಯಾಂಟಿಕ್ ವಸ್ತುವಿಗೆ ಪ್ರಾಚೀನ ಸಾಹಿತ್ಯ ಮಾರ್ಗದ ರೂಪವಿತ್ತಿರುವ ಈತನ ಕಲೆಯನ್ನು ಪವಾಡ ಎಂದೇ ಬಣ್ಣಿಸಬೇಕು. ಪೂಷ್ಕಿನ್ ಉತ್ತಮ ವಿಮರ್ಶಕನೂ ಹೌದು. 

ಪೂಷ್ಕಿನ್ ಬಾಳಿನಲ್ಲಿ ಸುಖ-ದುಃಖಗಳನ್ನು ಪ್ರಧಾನವೆಂದು ಎಣಿಸುವುದಿಲ್ಲ. ಇವನಿಗೆ ಬಾಳು ಚೈತನ್ಯಮಯವಾದ ಅನುಭವಗಳ ಆಕರ. ತೋರಿಕೆಯ ಜೀವವನ್ನು ಮಾತ್ರ ಈತ ಸಹಿಸಲಾರ. ಜೀವನ ಕಷ್ಟ ಹಾಗೂ ದುರಂತಗಳಿಂದ ಕೂಡಿದ್ದರೂ ಅದನ್ನು ಧೈರ್ಯವಾಗಿ ಸ್ವೀಕರಿಸಬೇಕೆಂಬುದೇ ಇವನ ಸಂದೇಶ. 

	ಪೂಷ್ಕಿನ್ನನದು ಬಹುಮುಖ ಪ್ರತಿಭೆ. ಅದ್ಭುತ ಕಲ್ಪನಾಶಕ್ತಿ. ರಷ್ಯನ್ ಕವಿಗಳು ಫ್ರೆಂಚ್ ಕವಿಗಳು, ಬೈರನ್, ಸ್ಕಾಟ್ ಇವರೆಲ್ಲರ ಪ್ರಭಾವಕ್ಕೆ ಒಳಗಾದರೂ ಎಲ್ಲ ಪ್ರಭಾವಗಳನ್ನೂ ರಕ್ತಗತ ಮಾಡಿಕೊಂಡು ಸ್ವತಂತ್ರವೂ ಸತ್ಯಪೂರ್ಣವೂ ಆದ ಕೃತಿಗಳನ್ನು ಈತ ರಚನೆ ಮಾಡಿದ. ಪಾಶ್ಚಾತ್ಯ ಸಾಹಿತ್ಯದ ಎಲ್ಲ ರೂಪಗಳನ್ನೂ ಪ್ರಭೇದಗಳನ್ನೂ ಈತ ರಷ್ಯನ್ ಭಾಷೆ ಸಾಹಿತಿಗಳಲ್ಲಿ ಚೇತನದೊಂದಿಗೆ ಸಮನ್ವಯ ಮಾಡಿದ. ಹಲವು ರಷ್ಯನ್ ಸಾಹಿತಿಗಳಲ್ಲಿ ಕಂಡುಬರುವ ಭಾವಪೂರ್ಣವಾದ ಆತ್ಮಶೋಧ ಇವನಲ್ಲಿ ಕಾಣಬರುವುದಿಲ್ಲ. ಅದ್ಭುತವಾದ ಸಮತೂಕ ಇವನ ಸಾಹಿತ್ಯದ ವಿಶಿಷ್ಟ ಲಕ್ಷಣ. ಇದರಿಂದ ಮಾನವೀಯತೆಯನ್ನು ರಷ್ಯನ್ ಸಾಹಿತ್ಯಕ್ಕೆ ತಂದುಕೊಂಡು ಅದನ್ನು ಯೂರೋಪಿನ ಸಾಹಿತ್ಯದ ಭಾಗವನ್ನಾಗಿ ಮಾಡುವುದು ಸಾಧ್ಯವಾಯಿತು. ಹೊಸ ವಸ್ತುಗಳನ್ನು ರಷ್ಯನ್ ಸಾಹಿತ್ಯಕ್ಕೆ ಸೇರಿಸಿ ಅದರ ವಾಸ್ತವಿಕತೆಗೆ ಮಾರ್ಗದರ್ಶನ ಮಾಡಿದ ಮತ್ತು ಅದನ್ನು ಜನಸಾಮಾನ್ಯರ ಮನೋಧರ್ಮ ಹತ್ತಿರಕ್ಕೆ ತಂದ ಸಾಧನೆ ಪೂಷ್ಕಿನ್ನನದು. ಇವನ ಕೃತಿಗಳಲ್ಲಿ ರಷ್ಯನ್ ಭಾಷೆ ಪರಿಪೂರ್ಣತೆಯನ್ನು ಪಡೆಯಿತು. ಇವನ ಕಾಲವನ್ನು ರಷ್ಯದ ಒಬ್ಬ ವ್ಯಕ್ತಿಯ ಸುವರ್ಣಯುಗ ಎಂದು ವರ್ಣಿಸಿದ್ದಾರೆ. ಅತಿ ದಬ್ಬಾಳಿಕೆಯ ಯುಗದಲ್ಲಿಯೂ ಸಾಹಿತಿಯ ಸ್ವಾತಂತ್ರ್ಯವನ್ನೂ ಉಳಿಸಿಕೊಂಡ ಕೀರ್ತಿಯೂ ಪೂಷ್ಕಿನ್ನನಿಗೆ ಸೇರಬೇಕು. 
(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ